Swavalambi Sarathi Scheme: ಸ್ವಂತ ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಸಬೇಕೇ? ₹4 ಲಕ್ಷದವರೆಗೆ ಸಹಾಯಧನ, ನ.30 ಕೊನೆಯ ದಿನ

swavalambi sarathi scheme: ಸ್ವಂತ ವಾಹನ ಇಟ್ಟುಕೊಂಡು ದುಡಿಯಬೇಕು ಅನ್ನೋ ಕನಸಿದೆಯಾ? ಹಾಗಿದ್ದರೆ ಸರ್ಕಾರದ ಈ ಯೋಜನೆ ನಿಮಗಾಗಿಯೇ. ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಗಣೆ ವಾಹನ ಮತ್ತು ಟ್ಯಾಕ್ಸಿ (ಹಳದಿ ಬೋರ್ಡ್) ವಾಹನ ಖರೀದಿಸಲು ಗರಿಷ್ಠ ₹4 ಲಕ್ಷ ಸಬ್ಸಿಡಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಹಾಕಲು ಕೊನೆಯ ದಿನಾಂಕ ನವೆಂಬರ್ 30.

ಎಷ್ಟು ಸಬ್ಸಿಡಿ ಸಿಗುತ್ತೆ?

ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ (ಬ್ಯಾಂಕ್ ಸಹಯೋಗದೊಂದಿಗೆ) ವಾಹನದ ಒಟ್ಟು ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ₹4 ಲಕ್ಷ, ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ ಸಿಗುತ್ತದೆ.

ಫುಡ್ ಟ್ರಕ್ ಮಾಡೋ ಪ್ಲಾನ್ ಇದೆಯಾ?

ಫಾಸ್ಟ್ ಫುಡ್ ಟ್ರಕ್, ಟ್ರೈಲರ್, ಮೊಬೈಲ್ ಕಿಚನ್, ಫುಡ್ ಕಿಯೋಸ್ಕ್ ಅಥವಾ ಫುಡ್ ಕಾರ್ಟ್ ವಾಹನಗಳಿಗೂ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ₹4 ಲಕ್ಷ ಸಹಾಯಧನ ಲಭ್ಯ. ಆದರೆ ಸಫಾಯಿ ಕರ್ಮಚಾರಿ ನಿಗಮದ ಫಲಾನುಭವಿಗಳಿಗೆ ಇದು ಅನ್ವಯಿಸುವುದಿಲ್ಲ.

ಇದನ್ನೂ ಓದಿ: Ganga Kalyana Yojane: ಬೋರ್‌ವೆಲ್ ಕೊರೆಸಲು ಸರ್ಕಾರದಿಂದಲೇ 4 ಲಕ್ಷ ಸಹಾಯಧನ! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಶುರು

ಹೈನುಗಾರಿಕೆಗೂ ಸಹಾಯಧನ

ಎರಡು ಹಸು ಅಥವಾ ಎರಡು ಎಮ್ಮೆ ಸಾಕಿ ಹೈನುಗಾರಿಕೆ ಆರಂಭಿಸುವವರಿಗೆ ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ ₹1.25 ಲಕ್ಷ ಸಿಗುತ್ತದೆ (ಸಫಾಯಿ ಕರ್ಮಚಾರಿ ನಿಗಮ ಹೊರತುಪಡಿಸಿ).

ಸಣ್ಣ ಉದ್ಯಮ, ವ್ಯಾಪಾರ ಶುರು ಮಾಡೋರಿಗೂ ಅವಕಾಶ

ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ, ವ್ಯಾಪಾರ ಹಾಗೂ ಇತರೆ ಉದ್ದೇಶಗಳಿಗೆ ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಠ ₹2 ಲಕ್ಷ ಸಹಾಯಧನ ನೀಡಲಾಗುತ್ತದೆ.

ಯಾವ ನಿಗಮಗಳಿಂದ ಅರ್ಜಿ ಆಹ್ವಾನ?

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
  • ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ

ಬೇರೆ ಯೋಜನೆಗಳಿಗೂ ಅರ್ಜಿ ಹಾಕಬಹುದು

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಸಹಯೋಗದೊಂದಿಗೆ) ಹಾಗೂ ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗಳಿಗೂ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳೇನು?

  • ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು
  • ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ ಅಥವಾ ಆದಿ ದ್ರಾವಿಡ ಎಂದು ಇದ್ದರೆ, ಮೂಲ ಜಾತಿ ನಮೂದಿಸಿದ ಸ್ವಯಂ ಘೋಷಣಾ ಪತ್ರ ಕಡ್ಡಾಯ
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು

ಬೇಕಾದ ದಾಖಲೆಗಳು

  • ಭಾವಚಿತ್ರ
  • ಜಾತಿ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಇರಬೇಕು)
  • ಆದಾಯ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಇರಬೇಕು)
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಹೇಗೆ ಸಲ್ಲಿಸುವುದು?

ಸೇವಾ ಸಿಂಧು ವೆಬ್‌ಸೈಟ್ ಮೂಲಕ ನೀವೇ ನೇರವಾಗಿ ಅರ್ಜಿ ಸಲ್ಲಿಸಬಹುದು: https://sevaone.karnataka.gov.in/services. ಇಲ್ಲವಾದರೆ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೂ ಹೋಗಬಹುದು.

ಈಗಾಗಲೇ ಅರ್ಜಿ ಹಾಕಿದ್ದೀರಾ?

2023-24, 2024-25 ಅಥವಾ 2025-26ನೇ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಹಾಕುವ ಅಗತ್ಯವಿಲ್ಲ.

ಹೆಚ್ಚಿನ ಮಾಹಿತಿಗೆ

ನಿಮ್ಮ ಜಿಲ್ಲೆಯ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಿಗಮಗಳ ವೆಬ್‌ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ/ಎಸ್.ಟಿ ಸಹಾಯವಾಣಿ 9482300400 ಅನ್ನು ಸಂಪರ್ಕಿಸಿ.

Thippu Daasa
Verified
Digital Content Creator & Blogger

I am to Provide Reliable, Accurate and useful information on government schemes, job notifications, education news, scholarships and latest updates based on official sources.