Railway Recruitment: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯುತ್ತಿದೆ. ರೈಲ್ವೆ ನೇಮಕಾತಿ ಮಂಡಳಿಯು ದೇಶಾದ್ಯಂತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ ಹೊರಡಿಸಿದೆ.
ರೈಲ್ವೆ ಸೆಕ್ಷನ್ ಕಂಟ್ರೋಲರ್ ಭಾರತೀಯ ರೈಲ್ವೆಯ ಪ್ರಮುಖ ಕಾರ್ಯಾಚರಣೆ ಹುದ್ದೆಯಾಗಿದ್ದು, ಇವರು ನಿರ್ದಿಷ್ಟ ರೈಲು ಮಾರ್ಗಗಳಲ್ಲಿ ಸುರಕ್ಷಿತ ಮತ್ತು ಸುಗಮ ಸಂಚಾರವನ್ನು ನಿಯಂತ್ರಿಸುತ್ತಾರೆ. ಪದವೀಧರರಿಗಾಗಿ ಒಟ್ಟು 119 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕ ವೇತನವಾಗಿ 35,400 ರೂಪಾಯಿ ಇರಲಿದೆ.
Railway Recruitment Details
ಪ್ರಮುಖ ದಿನಾಂಕಗಳು: ಈ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 15 2026 ರಿಂದ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 14 2026 ಆಗಿದೆ. ಅರ್ಜಿ ಶುಲ್ಕವನ್ನು ಪಾವತಿಸಲು ಆಗಸ್ಟ್ 16 2026 ಕೊನೆಯ ದಿನವಾಗಿದೆ.
ಹುದ್ದೆಯ ವಿವರಗಳು: ನೇಮಕಾತಿ ಸಂಸ್ಥೆ ರೈಲ್ವೆ ನೇಮಕಾತಿ ಮಂಡಳಿ ಆಗಿದೆ. ಹುದ್ದೆಯ ಹೆಸರು ಸೆಕ್ಷನ್ ಕಂಟ್ರೋಲರ್ ಅಥವಾ ವಿಭಾಗ ನಿಯಂತ್ರಕ. ಒಟ್ಟು 119 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಉದ್ಯೋಗ ಸ್ಥಳ ಇರಲಿದೆ.
ಹುದ್ದೆಯ ಪ್ರಮುಖ ಜವಾಬ್ದಾರಿಗಳು: ಸೆಕ್ಷನ್ ಕಂಟ್ರೋಲರ್ ರೈಲುಗಳ ವೇಳಾಪಟ್ಟಿಯನ್ನು ಕಾಯ್ದುಕೊಳ್ಳುವುದು ಮತ್ತು ನಿಗದಿತ ಮಾರ್ಗದಲ್ಲಿ ಸುರಕ್ಷಿತವಾಗಿ ಸಂಚರಿಸುವುದನ್ನು ಖಚಿತಪಡಿಸುತ್ತಾರೆ. ಲೋಕೋ ಪೈಲಟ್ಗಳು ಅಂದರೆ ರೈಲು ಚಾಲಕರು, ನಿಲ್ದಾಣದ ಮಾಸ್ಟರ್ಗಳು ಮತ್ತು ಸಿಗ್ನಲಿಂಗ್ ಸಿಬ್ಬಂದಿಗಳ ನಡುವೆ ಸಮನ್ವಯತೆಯನ್ನು ಕಾಪಾಡುತ್ತಾರೆ. ಯಾವುದೇ ವಿಳಂಬ ಅಥವಾ ತಾಂತ್ರಿಕ ದೋಷಗಳು ಸಂಭವಿಸಿದಾಗ ತುರ್ತಾಗಿ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಇವರ ಮುಖ್ಯ ಕರ್ತವ್ಯವಾಗಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಜುಲೈ 01 2026 ರಂತೆ ಅಭ್ಯರ್ಥಿಯ ವಯಸ್ಸು 20 ರಿಂದ 33 ವರ್ಷಗಳ ನಡುವೆ ಇರಬೇಕು.
ವಯೋಸಡಿಲಿಕೆ ವಿವರಗಳು: ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಸಡಿಲಿಕೆ ಇರುತ್ತದೆ. ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಸಿಗಲಿದೆ. ಸಾಮಾನ್ಯ ವರ್ಗದ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಒಬಿಸಿ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 13 ವರ್ಷಗಳು ಹಾಗೂ ಎಸ್ಸಿ ಮತ್ತು ಎಸ್ಟಿ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಆಪ್ಟಿಟ್ಯೂಡ್ ಟೆಸ್ಟ್, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಇತರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿ ಇರುತ್ತದೆ. ಮಾಜಿ ಸೈನಿಕರು, ಎಸ್ಸಿ, ಎಸ್ಟಿ, ಇಬಿಸಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಪಾವತಿಯನ್ನು ಆನ್ಲೈನ್ ಮೂಲಕವೇ ಮಾಡಬೇಕು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ರೈಲ್ವೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ನಂತರ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನೇರ ಅರ್ಜಿಗಾಗಿ https://www.rrbapply.gov.in/#/auth/landing ಈ ಲಿಂಕ್ ಬಳಸಬಹುದು.