ಭಾರತದಲ್ಲಿ ಪ್ಲಾಸ್ಟಿಕ್ ನೋಟು ಬರ್ತಿದೆ! ₹10, ₹20 ನೋಟುಗಳಿಂದ ಪ್ರಯೋಗ, 200 ಕೋಟಿ ಪಾಲಿಮರ್ ನೋಟು

ಡಿಜಿಟಲ್ ಪೇಮೆಂಟ್ ಎಷ್ಟೇ ಜಾಸ್ತಿ ಆದ್ರೂ, ಕೈಯಲ್ಲಿರುವ ನಗದಿಗೆ ಭಾರತದಲ್ಲಿ ಇನ್ನೂ ವಿಶೇಷ ಸ್ಥಾನ ಇದೆ. ಈಗ ಕಾಗದದ ನೋಟಿನ ಬದಲು ಪ್ಲಾಸ್ಟಿಕ್ (ಪಾಲಿಮರ್) ಆಧಾರಿತ ನೋಟುಗಳನ್ನು ಪರೀಕ್ಷಿಸಲು ಭಾರತ ಮುಂದಾಗಿದೆ. ಮೊದಲ ಹಂತದಲ್ಲಿ ₹10 ಮತ್ತು ₹20 ಮುಖಬೆಲೆಯ ನೋಟುಗಳನ್ನು ಪ್ರಯೋಗಾತ್ಮಕವಾಗಿ ಮಾರುಕಟ್ಟೆಗೆ ಬಿಡಲಾಗುತ್ತದೆ.

ಎಷ್ಟು ನೋಟುಗಳು ಬರ್ತವೆ?

ಸರ್ಕಾರ ಒಪ್ಪಿರುವ ಹೊಸ ಪ್ರಸ್ತಾವನೆಯ ಪ್ರಕಾರ:

  • ₹10 ಪಾಲಿಮರ್ ನೋಟು: 100 ಕೋಟಿ
  • ₹20 ಪಾಲಿಮರ್ ನೋಟು: 100 ಕೋಟಿ
  • ಒಟ್ಟು: 200 ಕೋಟಿ ನೋಟುಗಳು, ಮುಖಬೆಲೆ ಮೊತ್ತ ಸುಮಾರು ₹3,000 ಕೋಟಿ

ಈಗಿನ ನೋಟುಗಳು ನಿಂತು ಹೋಗುತ್ತಾ?

ಇಲ್ಲ. ಈ ನೋಟುಗಳು ಈಗಿನ ಕಾಗದದ ನೋಟುಗಳನ್ನು ತಕ್ಷಣ ಬದಲಿಸುವುದಿಲ್ಲ. ಪರೀಕ್ಷಾ ಹಂತದಲ್ಲಿ ಎರಡೂ ಒಟ್ಟಿಗೆ ಚಲಾವಣೆಯಲ್ಲಿರುತ್ತವೆ. ಇವು ಎಷ್ಟು ಬಾಳಿಕೆ ಬರುತ್ತವೆ, ಬಳಕೆಯಲ್ಲಿ ಏನಾದರೂ ತೊಂದರೆ ಆಗುತ್ತದೆಯಾ ಎಂದು ಗಮನಿಸಿ, ಫಲಿತಾಂಶದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಇದು ಕೇವಲ ಆಲೋಚನೆಯ ಹಂತದಲ್ಲಿಲ್ಲ ಎಂಬುದಕ್ಕೂ ಸೂಚನೆ ಇದೆ. ಆರ್‌ಬಿಐ ಅಂಗಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್, ಭದ್ರತಾ ಮಾನದಂಡಗಳಿಗೆ ತಕ್ಕ ಪಾಲಿಮರ್ ಪೇಪರ್ ಪೂರೈಸಲು ಜಗತ್ತಿನಾದ್ಯಂತ ಅರ್ಹ ಕಂಪನಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ.

ಭಾರತಕ್ಕೆ ಇದು ಹೊಸ ಪ್ರಯೋಗ ಅಲ್ಲ

ಪಾಲಿಮರ್ ನೋಟಿನ ಯೋಚನೆ ಭಾರತದಲ್ಲಿ ಹೊಸದೇನಲ್ಲ. 2012ರಲ್ಲೇ ₹10 ನೋಟುಗಳನ್ನು ಪಾಲಿಮರ್‌ನಲ್ಲಿ ಮಾಡಿ ಐದು ನಗರಗಳಲ್ಲಿ ಪ್ರಯೋಗಿಸಲು ನಿರ್ಧರಿಸಲಾಗಿತ್ತು. ವಿವಿಧ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿ ಗಮನದಲ್ಲಿಟ್ಟು ಆಯ್ಕೆ ಮಾಡಿದ ನಗರಗಳು:

  • ಕೊಚ್ಚಿ
  • ಮೈಸೂರು
  • ಜೈಪುರ
  • ಭುವನೇಶ್ವರ
  • ಶಿಮ್ಲಾ

ಆಗ ಒಂದು ಬಿಲಿಯನ್ (100 ಕೋಟಿ) ₹10 ನೋಟುಗಳನ್ನು ಪ್ರಯೋಗಕ್ಕೆ ಉದ್ದೇಶಿಸಲಾಗಿತ್ತು. ಸರ್ಕಾರ ಆಗ ಒಂದು ಮುಖ್ಯ ಸ್ಪಷ್ಟನೆ ನೀಡಿತ್ತು: ಪಾಲಿಮರ್ ನೋಟಿನ ಮುಖ್ಯ ಉದ್ದೇಶ ನಕಲಿ ನೋಟು ತಡೆಯುವುದಲ್ಲ, ಸಣ್ಣ ಮುಖಬೆಲೆಯ ನೋಟುಗಳ ಬಾಳಿಕೆ ಹೆಚ್ಚಿಸುವುದು. ನಕಲಿ ವಿರುದ್ಧ ಹೆಚ್ಚುವರಿ ಭದ್ರತೆ ಸಿಗಬಹುದು ಎಂದೂ ಹೇಳಲಾಗಿತ್ತು. 2014ರಲ್ಲೂ ಇದೇ ಐದು ನಗರಗಳಲ್ಲಿ ಪ್ರಯೋಗ ಮಾಡುವ ನಿರ್ಧಾರವನ್ನು ಸರ್ಕಾರ ಮತ್ತೆ ಹೇಳಿತ್ತು. ಆದರೆ ಆ ಪ್ರಯತ್ನ ದೇಶವ್ಯಾಪಿ ಬದಲಾವಣೆಯಾಗಿ ರೂಪುಗೊಳ್ಳಲಿಲ್ಲ.

ಈಗ ಪರಿಸ್ಥಿತಿ ಬೇರೆ. ಹಲವು ದೇಶಗಳಿಗೆ ದಶಕಗಳ ಅನುಭವ ಸಿಕ್ಕಿದೆ, ತಂತ್ರಜ್ಞಾನ ಸುಧಾರಿಸಿದೆ, ಭದ್ರತಾ ಫೀಚರ್‌ಗಳೂ ಬೆಳೆದಿವೆ. ಈ ಹಿನ್ನೆಲೆಯಲ್ಲಿ ಭಾರತ ಎರಡನೇ ಬಾರಿಗೆ ದೊಡ್ಡ ಮಟ್ಟದ ಪರೀಕ್ಷೆಗೆ ಸಿದ್ಧವಾಗುತ್ತಿದೆ.

ಯಾವ ದೇಶಗಳಲ್ಲಿ ಪಾಲಿಮರ್ ನೋಟು ಇದೆ?

  • ಆಸ್ಟ್ರೇಲಿಯಾ: ಈ ವಿಷಯದಲ್ಲಿ ಮುಂಚೂಣಿ. 1988ರಲ್ಲಿ ಮೊದಲ ಪಾಲಿಮರ್ ನೋಟು ಬಿಡುಗಡೆ ಮಾಡಿ, 1992ರಿಂದ 1996ರ ನಡುವೆ ಎಲ್ಲಾ ನೋಟುಗಳನ್ನು ಪಾಲಿಮರ್‌ಗೆ ಬದಲಿಸಿತು. ಈಗ $5, $10, $20, $50, $100 ಎಲ್ಲವೂ ಪಾಲಿಮರ್‌ನಲ್ಲಿವೆ.
  • ಕೆನಡಾ: ವ್ಯಾಪಕವಾಗಿ ಅಳವಡಿಸಿಕೊಂಡಿದೆ. ಬ್ಯಾಂಕ್ ಆಫ್ ಕೆನಡಾ ಅಧ್ಯಯನದ ಪ್ರಕಾರ ಕೆಲವು ನೋಟುಗಳ ಬಾಳಿಕೆ ಕಾಗದದ ನೋಟಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು.
  • ಬ್ರಿಟನ್: 2016ರಲ್ಲಿ £5 ಪಾಲಿಮರ್ ನೋಟಿನಿಂದ ಶುರು. ನಂತರ £10, £20, £50 ಗೂ ವಿಸ್ತರಿಸಿ, 2021ರ ವೇಳೆಗೆ ನಾಲ್ಕೂ ಪ್ರಮುಖ ನೋಟುಗಳು ಪಾಲಿಮರ್‌ಗೆ ಬಂದವು.
  • ನ್ಯೂಜಿಲೆಂಡ್: $5, $10, $20, $50, $100 ಎಲ್ಲವೂ ಪಾಲಿಮರ್‌ನಲ್ಲಿ ಮುದ್ರಣ.

ಇದಲ್ಲದೆ ಸಿಂಗಪುರ, ರೊಮೇನಿಯಾ, ವಿಯೆಟ್ನಾಂ, ಬ್ರೂನಿ, ಮೆಕ್ಸಿಕೋ, ಫಿಲಿಪೈನ್ಸ್, ಮಲೇಷ್ಯಾ, ಚಿಲಿ, ಮಾರಿಷಸ್, ಫಿಜಿ, ಪಪುವಾ ನ್ಯೂ ಗಿನಿ, ನಮೀಬಿಯಾ, ನೈಜೀರಿಯಾ, ಕುವೈತ್, ಸೌದಿ ಅರೇಬಿಯಾ, ಅಂಗೋಲಾ, ಕೋಸ್ಟರಿಕಾ, ಲೆಬನಾನ್ ಮುಂತಾದ ದೇಶಗಳೂ ಬೇರೆ ಬೇರೆ ರೂಪದಲ್ಲಿ ಪಾಲಿಮರ್ ನೋಟು ಬಳಸುತ್ತಿವೆ. ಸಂಬಂಧಿತ ಕೇಂದ್ರ ಬ್ಯಾಂಕ್‌ಗಳು ಮತ್ತು ಉದ್ಯಮ ವಲಯದ ಪ್ರಕಾರ ಜಗತ್ತಿನ 40ಕ್ಕೂ ಹೆಚ್ಚು ದೇಶಗಳು ಇದನ್ನು ಅಳವಡಿಸಿಕೊಂಡಿವೆ.

ಆದರೆ ಒಂದು ವ್ಯತ್ಯಾಸ ಗಮನಿಸಬೇಕು. ಪಾಲಿಮರ್ ಬಳಸುವ ಎಲ್ಲಾ ದೇಶಗಳು ತಮ್ಮ ಪೂರ್ತಿ ಕರೆನ್ಸಿಯನ್ನು ಪಾಲಿಮರ್‌ಗೆ ಬದಲಿಸಿಲ್ಲ. ಕೆಲವು ದೇಶಗಳು ಕೆಲವೇ ಮುಖಬೆಲೆಯ ನೋಟುಗಳನ್ನು ಮಾತ್ರ ಪಾಲಿಮರ್‌ನಲ್ಲಿ ಮಾಡಿವೆ, ಇನ್ನು ಕೆಲವು ಪೂರ್ತಿ ಸರಣಿಯನ್ನೇ ಬದಲಿಸಿವೆ.

ಇದರ ದೊಡ್ಡ ಲಾಭ ಏನು?

ಮುಖ್ಯ ಲಾಭ ಬಾಳಿಕೆ. ₹10, ₹20 ತರಹದ ಸಣ್ಣ ನೋಟುಗಳು ದಿನಕ್ಕೆ ಅತಿ ಹೆಚ್ಚು ಕೈ ಬದಲಾಗುತ್ತವೆ. ಜೇಬು, ಪರ್ಸ್, ಕ್ಯಾಶ್ ಕೌಂಟರ್, ಸ್ವಯಂಚಾಲಿತ ಯಂತ್ರಗಳು, ಸಣ್ಣ ಅಂಗಡಿಗಳು, ಎಲ್ಲೆಡೆ ಇವುಗಳ ಬಳಕೆ ಜಾಸ್ತಿ. ಹೀಗಾಗಿ ಬೇಗ ಕೊಳಕಾಗುವುದು, ಒದ್ದೆಯಾಗುವುದು, ಹರಿದು ಹೋಗುವುದು ಸಾಮಾನ್ಯ.

ಪಾಲಿಮರ್ ಮೇಲ್ಮೈ ನೀರು, ತೇವ, ಕೊಳೆ, ಎಣ್ಣೆಗೆ ಸಾಮಾನ್ಯ ಕಾಗದಕ್ಕಿಂತ ಉತ್ತಮ ಪ್ರತಿರೋಧ ತೋರಿಸುತ್ತದೆ. ಅಂದಾಜಿನ ಪ್ರಕಾರ ಬ್ರಿಟನ್‌ನಲ್ಲಿ ಪಾಲಿಮರ್ £5 ನೋಟು ಹಳೆಯ ಕಾಗದದ £5 ನೋಟಿಗಿಂತ ಸುಮಾರು 2.5 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. ಕೆನಡಾದಲ್ಲಿ ನಿಜವಾದ ಚಲಾವಣೆಯಲ್ಲಿ ಇದು ಸುಮಾರು ನಾಲ್ಕು ಪಟ್ಟು ಎಂದು ಬ್ಯಾಂಕ್ ಆಫ್ ಕೆನಡಾ ಹೇಳಿದೆ. ಭಾರತದಂತಹ ನಗದು ಬಳಕೆ ಹೆಚ್ಚಿರುವ ದೇಶಕ್ಕೆ ಇದು ದೊಡ್ಡ ವಿಷಯ.

ನಕಲಿ ನೋಟು ತಯಾರಿಸುವುದು ಕಷ್ಟ ಆಗುತ್ತಾ?

ಪಾಲಿಮರ್ ನೋಟುಗಳಲ್ಲಿ ಪಾರದರ್ಶಕ ಕಿಟಕಿ, ಹೊಲೊಗ್ರಾಫಿಕ್ ಅಂಶಗಳು, ಬಣ್ಣ ಬದಲಾಗುವ ಭದ್ರತಾ ಫೀಚರ್‌ಗಳನ್ನು ಸುಲಭವಾಗಿ ಸೇರಿಸಬಹುದು. ಕೆನಡಾ ತನ್ನ ನೋಟುಗಳಲ್ಲಿ ಪಾರದರ್ಶಕ ಕಿಟಕಿ, ಹೊಲೊಗ್ರಫಿ ಬಳಸಿದೆ. ಬ್ರಿಟನ್ ಕೂಡ ನಕಲು ಕಷ್ಟವಾಗುವಂತೆ ಹೊಸ ಭದ್ರತಾ ಫೀಚರ್‌ಗಳನ್ನು ಪಾಲಿಮರ್ ತರಲು ಮುಖ್ಯ ಕಾರಣವೆಂದು ಹೇಳಿತ್ತು. ಪಾಲಿಮರ್ ಸರಣಿ ಬಂದ ನಂತರ ನಕಲಿ ನೋಟುಗಳ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ತಿಳಿಸಿದೆ.

ಆದರೆ ಇಲ್ಲಿ ಒಂದು ಎಚ್ಚರಿಕೆ ಅಗತ್ಯ. ಪಾಲಿಮರ್ ಅಂದರೆ ನಕಲು ಮಾಡಲೇ ಸಾಧ್ಯವಿಲ್ಲದ ನೋಟು ಅಂತ ಅಲ್ಲ. ತಂತ್ರಜ್ಞಾನ ಬೆಳೆದಂತೆ ನಕಲಿ ನೋಟು ತಯಾರಕರ ತಂತ್ರಗಳೂ ಬದಲಾಗುತ್ತವೆ.

Thippu Daasa
Verified
Digital Content Creator & Blogger

I am to Provide Reliable, Accurate and useful information on government schemes, job notifications, education news, scholarships and latest updates based on official sources.