Central Government scheme: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿಯು ಸಾರ್ವಜನಿಕರಿಗಾಗಿ ಹಲವು ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳಲ್ಲಿ ಮಾಡುವ ಹೂಡಿಕೆಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಗ್ಯಾರಂಟಿ ನೀಡುವುದರಿಂದ ಇವು ಅತ್ಯಂತ ಸುರಕ್ಷಿತವಾಗಿವೆ. ಇಂತಹ ಯೋಜನೆಗಳಲ್ಲಿ ಅಂಚೆ ಕಚೇರಿಯ ತಿಂಗಳ ಆದಾಯ ಯೋಜನೆ ಅಂದರೆ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಅತ್ಯಂತ ಜನಪ್ರಿಯವಾಗಿದೆ. ಮಕ್ಕಳಿಗೆ ಉಳಿತಾಯ ಮಾಡಲು ಬಯಸುವ ಪೋಷಕರಿಗೂ ಇದು ಸೂಕ್ತವಾದ ಯೋಜನೆಯಾಗಿದೆ.
ಬಡ್ಡಿದರ ಮತ್ತು ಹೂಡಿಕೆಯ ಮಿತಿ: ಪ್ರಸ್ತುತ ಈ ಯೋಜನೆಗೆ ಶೇಕಡಾ 7.4 ರಷ್ಟು ವಾರ್ಷಿಕ ಬಡ್ಡಿದರ ನೀಡಲಾಗುತ್ತಿದೆ. ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಬಡ್ಡಿಯ ಹಣ ಖಾತೆಗೆ ಜಮೆಯಾಗುತ್ತದೆ. ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡುವ ಮೂಲಕ ಈ ಖಾತೆಯನ್ನು ಪ್ರಾರಂಭಿಸಬಹುದು. ಐದು ವರ್ಷಗಳ ಕಾಲಾವಧಿ ಇರುವ ಈ ಯೋಜನೆಯಲ್ಲಿ ವೈಯಕ್ತಿಕ ಖಾತೆಗೆ ಗರಿಷ್ಠ 9 ಲಕ್ಷ ರೂಪಾಯಿ ಹಾಗೂ ಜಂಟಿ ಖಾತೆಗೆ ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಲು ಅವಕಾಶವಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆ ತೆರೆಯಬಹುದು ಆದರೆ ಒಟ್ಟು ಹೂಡಿಕೆ 9 ಲಕ್ಷ ರೂಪಾಯಿ ಮೀರಬಾರದು. ಉದಾಹರಣೆಗೆ 5 ಲಕ್ಷ ರೂಪಾಯಿ ಠೇವಣಿ ಇಟ್ಟರೆ ಶೇಕಡಾ 7.4 ಬಡ್ಡಿದರದಂತೆ ವರ್ಷಕ್ಕೆ 37,000 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ಪ್ರತಿ ತಿಂಗಳು 3,083 ರೂಪಾಯಿ ಆದಾಯ ದೊರೆಯುತ್ತದೆ.
ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯುವ ವಿಧಾನ: ಈ ಯೋಜನೆಯಲ್ಲಿ ಗರಿಷ್ಠ ಮೂವರು ವಯಸ್ಕರು ಸೇರಿ ಜಂಟಿ ಖಾತೆ ತೆರೆಯಬಹುದು. ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪೋಷಕರು ಖಾತೆ ತೆರೆಯಲು ಅವಕಾಶವಿದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ತಮ್ಮ ಹೆಸರಿನಲ್ಲೇ ಖಾತೆಯನ್ನು ನಿರ್ವಹಿಸಬಹುದು.
ಖಾತೆ ಮುಕ್ತಾಯ ಮತ್ತು ಹಣ ಹಿಂಪಡೆಯುವ ನಿಯಮಗಳು: ಈ ಯೋಜನೆಗೆ 5 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ. ತುರ್ತು ಸಂದರ್ಭದಲ್ಲಿ ಅವಧಿಗಿಂತ ಮುಂಚಿತವಾಗಿಯೇ ಖಾತೆ ಮುಚ್ಚಬಹುದು. ಆದರೆ ಖಾತೆ ತೆರೆದ ಒಂದು ವರ್ಷದ ಒಳಗಾಗಿ ಹಣ ಹಿಂಪಡೆಯಲು ಸಾಧ್ಯವಿಲ್ಲ. ಒಂದು ವರ್ಷದಿಂದ ಮೂರು ವರ್ಷಗಳ ಒಳಗಾಗಿ ಖಾತೆ ಮುಚ್ಚಿದರೆ ಠೇವಣಿ ಮೊತ್ತದಲ್ಲಿ ಶೇಕಡಾ 2 ರಷ್ಟು ಹಣ ಕಡಿತಗೊಳಿಸಲಾಗುತ್ತದೆ. ಮೂರು ವರ್ಷಗಳ ನಂತರ ಅಥವಾ ಐದು ವರ್ಷಗಳ ಒಳಗೆ ಮುಚ್ಚಿದರೆ ಶೇಕಡಾ 1 ರಷ್ಟು ಹಣ ಕಡಿತವಾಗುತ್ತದೆ.
ಸಂಪಾದಿಸಿದ ಬಡ್ಡಿಯನ್ನು ಪ್ರತಿ ತಿಂಗಳು ಅಂಚೆ ಕಚೇರಿಯ ಉಳಿತಾಯ ಖಾತೆಗೆ ಅಥವಾ ಇಸಿಎಸ್ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಯಾವುದೇ ತಿಂಗಳಲ್ಲಿ ಬಡ್ಡಿಯ ಹಣವನ್ನು ಹಿಂಪಡೆಯದಿದ್ದರೆ ಆ ಮೊತ್ತಕ್ಕೆ ಹೆಚ್ಚುವರಿ ಬಡ್ಡಿ ಸಿಗುವುದಿಲ್ಲ.