ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ ಪ್ರತಿ ಒಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು 2500 ರೂಪಾಯಿ ಸಿಗುತ್ತದೆ

ಕೇಂದ್ರ ಸರ್ಕಾರವು ದೇಶದ ಮಾಜಿ ಸೈನಿಕರು, ಮಾಜಿ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಮಕ್ಕಳು ಮತ್ತು ವಿಧವೆಯರ ಉನ್ನತ ಶಿಕ್ಷಣಕ್ಕಾಗಿ ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಒಟ್ಟು 5500 ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಆರ್ಥಿಕ ನೆರವು ನೀಡಲಾಗುತ್ತದೆ.

ವಿದ್ಯಾರ್ಥಿವೇತನದ ಮೊತ್ತ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ಆಧಾರದಲ್ಲಿ ವಿದ್ಯಾರ್ಥಿವೇತನ ಪಾವತಿಸಲಾಗುತ್ತದೆ. ಬಾಲಕರಿಗೆ ಪ್ರತಿ ತಿಂಗಳು 2500 ರೂಪಾಯಿ ಹಾಗೂ ಬಾಲಕಿಯರಿಗೆ ಪ್ರತಿ ತಿಂಗಳು 3000 ರೂಪಾಯಿ ನಿಗದಿಪಡಿಸಲಾಗಿದೆ. ಒಟ್ಟು 5500 ಸೀಟುಗಳನ್ನು ಬಾಲಕರು ಮತ್ತು ಬಾಲಕಿಯರಿಗೆ ತಲಾ 2750 ರಂತೆ ಸಮಾನವಾಗಿ ಹಂಚಲಾಗುತ್ತದೆ. ಕೋರ್ಸ್‌ನ ಅವಧಿಗೆ ಅನುಗುಣವಾಗಿ ಎರಡರಿಂದ ಐದು ವರ್ಷಗಳ ಕಾಲ ಈ ನೆರವು ಸಿಗಲಿದೆ. ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಠ ಶೈಕ್ಷಣಿಕ ಅರ್ಹತೆಯಲ್ಲಿ ಅಂದರೆ ಪಿಯುಸಿ, ಡಿಪ್ಲೊಮಾ ಅಥವಾ ಪದವಿಯಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಪಡೆದಿರಬೇಕು.

ಬಿಇ, ಬಿಟೆಕ್, ಎಂಬಿಬಿಎಸ್, ಬಿಡಿಎಸ್, ಬಿಎಡ್, ಬಿಬಿಎ, ಬಿಸಿಎ, ಬಿ ಫಾರ್ಮಾ, ಬಿಎ ಎಲ್‌ಎಲ್‌ಬಿ ನಂತಹ ಮಾನ್ಯತೆ ಪಡೆದ ಕೋರ್ಸ್‌ಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳಿಗೆ ಮಾತ್ರ ಅವಕಾಶವಿದೆ. ಡಿಸ್ಟೆನ್ಸ್ ಲರ್ನಿಂಗ್ ಅಥವಾ ಪಾರ್ಟ್ ಟೈಮ್ ಕೋರ್ಸ್ ಮಾಡುವವರಿಗೆ ಅವಕಾಶವಿಲ್ಲ.

ಆದ್ಯತೆಯ ಕ್ರಮಗಳು ಕೋರ್ಸ್‌ಗಳಲ್ಲಿ ಹುತಾತ್ಮರಾದ ಅಥವಾ ಸೇವೆ ಸಲ್ಲಿಸುವಾಗ ಅಂಗವಿಕಲರಾದ ಸೈನಿಕರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರದ ಆದ್ಯತೆಗಳನ್ನು ಸೇವಾ ಅವಧಿಯಲ್ಲಿ ಮೃತಪಟ್ಟವರು, ಗ್ಯಾಲಂಟ್ರಿ ಪ್ರಶಸ್ತಿ ವಿಜೇತರು ಮತ್ತು ಇತರ ಮಾಜಿ ಸೈನಿಕರ ಮಕ್ಕಳಿಗೆ ನೀಡಲಾಗುತ್ತದೆ.

ಅಗತ್ಯವಿರುವ ಮುಖ್ಯ ದಾಖಲೆಗಳು ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ ಪತ್ರಗಳು, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಬೋನಾಫೈಡ್ ಪ್ರಮಾಣಪತ್ರ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವ ಪ್ರಮಾಣಪತ್ರ, ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಅಂಕಪಟ್ಟಿ, ಮಾಜಿ ಸೈನಿಕರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೇಂದ್ರೀಯ ಸೈನಿಕ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಅಗತ್ಯ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಕಾಲಕಾಲಕ್ಕೆ ಕಳುಹಿಸುವ ಇಮೇಲ್ ಮತ್ತು ಮೊಬೈಲ್ ಸಂದೇಶಗಳನ್ನು ಗಮನಿಸುತ್ತಿರಬೇಕು.

ಮುಂದಿನ ವರ್ಷಗಳ ನವೀಕರಣಕ್ಕೆ ಅಂದರೆ ರಿನೆವಲ್ ಅರ್ಜಿ ಸಲ್ಲಿಸಲು ಪ್ರತಿ ಸೆಮೆಸ್ಟರ್ ಅಥವಾ ವರ್ಷದಲ್ಲಿ ಕನಿಷ್ಠ ಶೇಕಡಾ 50 ರಷ್ಟು ಅಂಕಗಳೊಂದಿಗೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.