ನೀವು ಹೊಸ ಮನೆಗೆ ಬಾಡಿಗೆಗೆ ತೆರಳಿದ್ದೀರಾ ಅಥವಾ ಹೊಸ ನಗರಕ್ಕೆ ಸ್ಥಳಾಂತರಗೊಂಡಿದ್ದೀರಾ ಹಾಗಿದ್ದರೆ ಆಧಾರ್ ಕಾರ್ಡ್ನಲ್ಲಿ ಹೊಸ ವಿಳಾಸವನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ ತಿಳಿಸಿದೆ.
ಸೂಕ್ತವಾದ ವಿಳಾಸದ ಪುರಾವೆ ಇದ್ದರೆ ಅಥವಾ ವಿಳಾಸ ದೃಢೀಕರಣ ಪತ್ರ ಇದ್ದರೆ ಸುಲಭವಾಗಿ ಆಧಾರ್ ವಿಳಾಸವನ್ನು ಬದಲಾಯಿಸಬಹುದು. ಹೊಸ ಮನೆ ಅಥವಾ ನಗರಕ್ಕೆ ಬದಲಾದಾಗ ಆಧಾರ್ ಅಪ್ಡೇಟ್ ಮಾಡಲು ಮರೆಯಬೇಡಿ ಎಂದು ಯುಐಡಿಎಐ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ
ಆಧಾರ್ನಲ್ಲಿ ವಿಳಾಸ ಬದಲಾಯಿಸಲು ಆನ್ಲೈನ್ ಮತ್ತು ಆಫ್ಲೈನ್ ಎರಡು ಮಾರ್ಗಗಳಿವೆ. ಆಫ್ಲೈನ್ ವಿಧಾನದಲ್ಲಿ ಆಧಾರ್ ಕೇಂದ್ರಕ್ಕೆ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ವಿಳಾಸ ಬದಲಾಯಿಸಬಹುದು. ಆನ್ಲೈನ್ನಲ್ಲಿ ಮಾಡುವುದಾದರೆ ಯುಐಡಿಎಐ ಅಧಿಕೃತ ಪೋರ್ಟಲ್ ಅಥವಾ ಮೊಬೈಲ್ ಆಪ್ ಬಳಸಬಹುದು. ಪೋರ್ಟಲ್ನಲ್ಲಿ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಬಳಸಿ ಲಾಗಿನ್ ಆಗಬೇಕು. ನಂತರ ವಿಳಾಸ ಅಪ್ಡೇಟ್ ಆಯ್ಕೆ ಮಾಡಿಕೊಂಡು ಹೊಸ ವಿಳಾಸವನ್ನು ನಮೂದಿಸಬೇಕು.
ಅಗತ್ಯ ದಾಖಲೆಗಳು ಮತ್ತು ಶುಲ್ಕ
ವಿಳಾಸ ಅಪ್ಡೇಟ್ ಮಾಡಲು ಹೊಸ ವಿಳಾಸ ಹೊಂದಿರುವ ದಾಖಲೆಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಒಂದು ವೇಳೆ ಈ ದಾಖಲೆ ಇಲ್ಲದಿದ್ದರೆ ಕುಟುಂಬದ ಯಜಮಾನರ ಅಂದರೆ ಹೆಡ್ ಆಫ್ ಫ್ಯಾಮಿಲಿ ಸಮ್ಮತಿಯ ಆಧಾರದ ಮೇಲೆಯೂ ವಿಳಾಸ ಬದಲಾಯಿಸಬಹುದು. ಆನ್ಲೈನ್ ಅಪ್ಡೇಟ್ಗಾಗಿ 75 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಸೇವಾ ವಿನಂತಿ ಸಂಖ್ಯೆ ಅಂದರೆ ಎಸ್ಆರ್ಎನ್ ಸಿಗಲಿದ್ದು, ಇದರ ಮೂಲಕ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಸಾಮಾನ್ಯವಾಗಿ ಒಂದು ವಾರದೊಳಗೆ ವಿಳಾಸ ಅಪ್ಡೇಟ್ ಆಗುತ್ತದೆ.
ವಿಳಾಸ ಬದಲಾವಣೆಗೆ ಮಾನ್ಯವಾದ ದಾಖಲೆಗಳು
ಪಾಸ್ಪೋರ್ಟ್, ಬ್ಯಾಂಕ್ ಪಾಸ್ಬುಕ್, ಪೋಸ್ಟ್ ಆಫೀಸ್ ಅಕೌಂಟ್ ಸ್ಟೇಟ್ಮೆಂಟ್, ವಿದ್ಯುತ್ ಬಿಲ್, ನೀರು ಸರಬರಾಜು ಬಿಲ್, ಗ್ಯಾಸ್ ಬಿಲ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ನೋಂದಾಯಿತ ಬಾಡಿಗೆ ಒಪ್ಪಂದ ಪತ್ರ ಅಥವಾ ಸರ್ಕಾರ ಜಾರಿಗೊಳಿಸಿದ ವಿಳಾಸ ಪ್ರಮಾಣಪತ್ರಗಳನ್ನು ನೀಡಬಹುದು. ಸಲ್ಲಿಸುವ ದಾಖಲೆಯಲ್ಲಿ ಅರ್ಜಿದಾರರ ಪೂರ್ಣ ಹೆಸರು ಮತ್ತು ಪ್ರಸ್ತುತ ವಿಳಾಸ ಸ್ಪಷ್ಟವಾಗಿರಬೇಕು.
ದಾಖಲೆಗಳಿಲ್ಲದಿದ್ದರೂ ಅವಕಾಶ
ಒಂದು ವೇಳೆ ವಿಳಾಸದ ಪುರಾವೆ ಇಲ್ಲದಿದ್ದರೂ ಕುಟುಂಬದ ಯಜಮಾನರ ವಿವರಗಳನ್ನು ಬಳಸಿ ವಿಳಾಸವನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಆಧಾರ್ನಲ್ಲಿ ಸರಿಯಾದ ವಿಳಾಸವಿದ್ದರೆ ಸರ್ಕಾರಿ ಮತ್ತು ಇತರ ಸೇವೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಪಡೆದುಕೊಳ್ಳಬಹುದು.